ರಾಮಗಾಣಿಗ, ಹಾರಾಡಿ
1902 - 69. ಯಕ್ಷಗಾನ ಬಯಲಾಟದ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರು. ರಂಗಸ್ಥಳದ ರಾಜ ಎಂದು ಹೆಸರು ಪಡೆದ ಇವರು ಹಾರಾಡಿ ರಾಮ ಎಂದೇ ಹೆಚ್ಚು ಪರಿಚಿತರು. 1902 ಮೇ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಬ್ರಹ್ಮಾವರದ ಬಳಿಯ ಹಾರಾಡಿಯಲ್ಲಿ ಜನಿಸಿದರು. ತಂದೆ ಹಾರಾಡಿ ಸುಬ್ಬಯ್ಯ, ಗಾಣಿಗ, ತಾಯಿ, ಕೊಲ್ಲು, ಕೈಗಾಣದಲ್ಲಿ ಎಣ್ಣೆ ತೆಗೆಯುವುದು ಇವರ ಕುಲಕಸಬು. ಹವ್ಯಾಸಕ್ಕಾಗಿ ಯಕ್ಷಗಾನ ಪ್ರವೇಶಿಸಿದ ಇವರು ಆ ಕ್ಷೇತ್ರದಲ್ಲೇ ಸಿದ್ಧಿ ಪಡೆದು, ಅದನ್ನು ವೃತ್ತಿಯನ್ನಾಗಿ ಮಾಡಿಕೊಂಡರು. ಇವರ ಹಿಂದಿನ ಮೂರು - ನಾಲ್ಕು ತಲೆಮಾರಿನವರು ಯಕ್ಷಗಾನ ಕಲಾವಿದರಾಗಿದ್ದರು. ಯಕ್ಷಗಾನ ಸೇರಲು ಇವರಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ದೊರೆತದ್ದು ತಾಯಿಯಿಂದ. ವೇಷಧಾರಿಗಳು ವಿಶಿಷ್ಟವಾಗಿ ತಲೆಗೆ ಮುಂಡಾಸು ಸುತ್ತುವ ಕ್ರಮ ಯಕ್ಷಗಾನಕ್ಕೆ ಇವರ ವಂಶದ ಕೊಡುಗೆ. ಇದು ಹಾರಾಡಿ ಮುಂಡಾಸು ಎಂದೇ ಹೆಸರಾಗಿದೆ.

ಹಾರಾಡಿಯವರ ಬಾಲ್ಯ ಬಡತನದಲ್ಲೇ ಕಳೆಯಿತು. ಆರಂಭದ ಶಿಕ್ಷಣವನ್ನು ಐಗಳ ಮಠದಲ್ಲಿ ಪೂರೈಸಿದರು. ಆ ಕಾಲದಲ್ಲೇ ಇವರು ನಾರಣಪ್ಪ, ಲಕ್ಷ್ಮೀಶರ ಕೃತಿಗಳನ್ನೂ ಜ್ಯೋತಿಷ್ಯ, ಪುರಾಣಾದಿ ಶಾಸ್ತ್ರಗಳನ್ನೂ ಪದ್ಯಗಳನ್ನು ಕಂಠಪಾಠ ಮಾಡುವುದು ಮೊದಲಾದ ಯಕ್ಷಗಾನದ ಪ್ರಾಥಮಿಕ ಶಿಕ್ಷಣವೂ ಇವರಿಗೆ ಇಲ್ಲಿಯೇ ದೊರಕಿತು. ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದ ಮೂಲಕ ರಂಗಪ್ರವೇಶ ಮಾಡಿದರು. ಈ ಮೇಳದಲ್ಲಿ ಸ್ವಲ್ಪಕಾಲ ಇದ್ದು ಅನಂತರ (1916) ಮಂದರ್ತಿ ಮೇಳವನ್ನು ಸೇರಿದರು. ಇದೇ ಮೇಳದಲ್ಲಿ ಸುಮಾರು ನಲವತ್ತೈದು ವರ್ಷಗಳ ಕಾಲ ಕಲಾವಿದರಾಗಿ ದುಡಿದರು. ಈ ನಡುವೆ ಸೌಕೂರು, ಸಾಲಿಗ್ರಾಮ, ಅಮೃತೇಶ್ವರಿ ಮತ್ತು ವರಂಗ ಮೇಳಗಳಲ್ಲೂ ಕಲಾವಿದರಾಗಿ ಪಾಲ್ಗೊಂಡಿದ್ದುಂಟು. ತೆಕ್ಕಟ್ಟೆ ಬಾಬಣ್ಣ ಶ್ಯಾನುಭಾಗ, ಬಿರ್ತಿ ರಾಮಚಂದ್ರಶಾಸ್ತ್ರೀ ಮತ್ತು ಶೇಷಗಿರಿ ಗಿಣಿ ಭಾಗವತರು ಇವರ ಗುರುಗಳಾಗಿದ್ದರು. ಆರಂಭದಲ್ಲಿ ಬಾಲಗೋಪಾಲ, ಕೋಡಂಗಿ ವೇಷ, ಸ್ತ್ರೀ ವೇಷ ಮೊದಲಾದುವನ್ನು ನಿರ್ವಹಿಸಿ ಪುರುಷ ವೇಷಗಳಲ್ಲಿ ಅಭಿನಯಿಸಲು ಆರಂಭಿಸಿದರು. ಭೀಷ್ಮ, ಭೀಮ, ಅರ್ಜುನ, ಕರ್ಣ, ಅಂಗಾರವರ್ಮ, ಭದ್ರಸೇನ, ಮೊದಲಾದ ಪೌರಾಣಿಕ ಪಾತ್ರಗಳಲ್ಲಿ ಅಸಾಧಾರಣ ಕೀರ್ತಿ ಪಡೆದರು. ಸಂದರ್ಭಕ್ಕೆ ತಕ್ಕಂತೆ ರಸಾಭಿನಯವನ್ನು ಅತ್ಯಂತ ಸಹಜವಾಗಿ ಸ್ಫುರಿಸುತ್ತಿದ್ದರು. ಮಾತಿನ ಸ್ವಭಾವಗಳು ಹಿತಮಿತವಾಗಿ ಹೊಮ್ಮಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದವು. ಇವರ ಮೈಕಟ್ಟು ವೇಷಕ್ಕೆ ಪೂರಕವಾಗಿದ್ದರಿಂದ ಯಕ್ಷಗಾನದ ಸಾಂಪ್ರದಾಯಿಕ ವೇಷದಲ್ಲಿ ಭವ್ಯವಾಗಿ ಕಾಣಿಸುತ್ತಿದ್ದರು. ರಂಗಸ್ಥಳದಲ್ಲಿನ ಇವರ ಭಂಗಿಯೇ ವಿಶಿಷ್ಟವಾಗಿತ್ತು. ಬಿಲ್ಲನ್ನು ಊರೆಗೋಲಿನಂತೆ ಇಟ್ಟುಕೊಂಡು ಒಂಟಿಕಾಲಿನಲ್ಲಿ ಗಂಭೀರವಾಗಿ ನಿಲ್ಲುವ ಇವರ ನಿಲುವು ಮೋಹಕವಾಗಿರುತ್ತಿತ್ತು. ಸದಾ ಹಸನ್ಮುಖಿಯಾಗಿದ್ದ ಇವರು ಮಿತ ಭಾಷಿ. ಸೌಜನ್ಯತೆ ಇವರ ಮತ್ತೊಂದು ಗುಣವಾಗಿತ್ತು. ಕಲಾಪ್ರತಿಭೆಗೆ ಈ ಎಲ್ಲ ಗುಣಗಳೂ ಇನ್ನಷ್ಟು ಮೆರುಗು ನೀಡಿದವು.

ಜನಪ್ರಿಯತೆ ಅಸಂಖ್ಯ ಮಾನಸನ್ಮಾನಗಳು ಹಾರಾಡಿಯವರನ್ನು ಹುಡುಕಿಕೊಂಡು ಬಂದವು. ಮುಂಬಯಿ, ಮದರಾಸು, ದೆಹಲಿ ನಗರಗಳ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. 1961ರಲ್ಲಿ ಮೈಸೂರು ರಾಜ್ಯ ಸರ್ಕಾರ ರಾಜ್ಯಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಭಾರತ ಸರ್ಕಾರ 1964ರಲ್ಲಿ ರಾಷ್ಟ್ರಪ್ರಶಸ್ತಿಯನ್ನು ನೀಡಿ ಗೌರವಿಸಿತು.

1966ರಲ್ಲಿ ಪಾಶ್ರ್ವವಾಯು ಪೀಡಿತರಾದ ಇವರು 1969ರಲ್ಲಿ ಡಿಸೆಂಬರ್ 11 ರಂದು ತಮ್ಮ 67ನೆಯ ವಯಸ್ಸಿನಲ್ಲಿ ನಿಧನ ಹೊಂದಿದರು. ಬಡಗುತಿಟ್ಟಿನ ಯಕ್ಷಗಾನ ಪಾತ್ರಗಳಿಗೆ ಹೊಸ ಮೆರುಗು ಮತ್ತು ಛಾಪು ಕೊಟ್ಟವರಲ್ಲಿ ಹಾರಾಡಿಯವರ ಪಾತ್ರ ಅವಿಸ್ಮರಣೀಯ.
(ಎಸ್.ಆರ್‍ಐ.ಬಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ